Thursday, 20 March 2025

ದಿನಕ್ಕೊಂದು ಶಿಶುಗೀತೆ

 *ದಿನಕ್ಕೊಂದು ಶಿಶುಗೀತೆ* 


*48.ಪುಟ್ಟ ಗುಬ್ಬಿ!* 


ನಮ್ಮ ಮನೆಯ ಮುಂದೆ ಒಂದು

ಗುಬ್ಬಿ ಬಂದಿತು/

ಬಿದ್ದ ಅಕ್ಕಿ ಕಾಳುಗಳನು

ಹೆಕ್ಕಿ ತಿಂದಿತು//


ನೀರನಿಡಲು ಹೋದೆ ನಾನು

ಬೆದರಿ ಹಾರಿತು!/

ಚಿಂವ್ ಚಿಂವ್ ಎಂದು ತನ್ನ 

ಬಳಗ ಸೇರಿತು// 


ಬಿಸಿಲ ಬಿಸಿಗೆ ಬೆಂದು ಬಂದು

ನೆರಳ ಬೇಡಿತು/

ನಳದ ಮೇಲೆ ಕುಳಿತು ಕೊಳವೆ

ಬಗ್ಗಿ ನೋಡಿತು!//


ನೀರು ಸಿಗದೆ ಗಂಟಲೆಲ್ಲಾ

ಒಣಗಿ ಸೊರಗಿತು/

ಅಲ್ಲಿ ಇಲ್ಲಿ ಸುತ್ತಿ ಸುತ್ತಿ

ಜಗುಲಿಗೊರಗಿತು!//


ಬಟ್ಟಲೊಳಗೆ ನೀರನಿಟ್ಟೆ

ಎದ್ದು ಕುಡಿಯಿತು/

ಮುದುರಿಕೊಂಡ ರೆಕ್ಕೆಯನ್ನು

ಕೆದರಿ ಬಡಿಯಿತು!//


ಅಂದಿನಿಂದ ದಿನವೂ ನೀರ

ಬಟ್ಟಲಿಟ್ಟೆನು/

ಒಂದು ಗುಬ್ಬಿ ಹತ್ತಾಗೆ

ನೋಡಿ ನಕ್ಕೆನು//


 _ರಚನೆ_ 


*ಭಾಗ್ಯ ಮಂಜುನಾಥ್.*

*ಎ.ಮಲ್ಲಾಪುರ.*

No comments:

Post a Comment