ಟೀಚರ್ ಪತ್ರಿಕೆಯಲ್ಲಿ ಟೀಚರಮ್ಮ ಟೀಚರ್ ವಿಷಯ ತಗೊಂಡು ಕೊನೆಯ ಪಿರಿಯಡ್ ನಲ್ಲಿ ಬಂದ್ರು...ಮಿಸ್ ಮಾಡದೆ ಟೀಚರ್ ಏನಂದ್ರು ಓದಿ..
#ಮಿಸ್ಸಿನಡೈರಿ
ಟೀಚರ್ ಪತ್ರಿಕೆ
ಧನ್ಯವಾದಗಳು ಉದಯ್ ಗಾಂವ್ಕರ್ ಸರ್
"ಗೋಡೆ ಕಟ್ಟುವ ಶಿಕ್ಷಣಕ್ಕಿಂತ ಸೇತುವೆ ಕಟ್ಟುವ ಶಿಕ್ಷಣ ನಮಗೆ ಬೇಕು".ಎಂಬ ತೊತ್ತೋಚಾನ್ ಪಾಠದೊಂದಿಗೆ ಆರಂಭವಾಗುವ ಮೇದಿನಿ ಕೆಸವಿನಮನೆ ಅವರ "ಮಿಸ್ಸಿನ ಡೈರಿ" ಯು 32ಲೇಖನಗಳನ್ನು ಒಳಗೊಂಡ ಒಂದು ಅನನ್ಯ ಕೃತಿ.ಇಲ್ಲಿ ಸ್ವತಃ ಶಿಕ್ಷಕಿಯಾಗಿರುವ ಲೇಖಕಿ ತನ್ನ ಕಣ್ಣು ಮತ್ತು ಹೃದಯ ಎರಡನ್ನೂ ತೆರೆದಿಟ್ಟುಕೊಂಡು ತನ್ನದೇ ತರಗತಿಯಲ್ಲಿ ಮಕ್ಕಳೊಂದಿಗೆ ಹೇಗೆ ವ್ಯವಹರಿಸಿದ್ದಾಳೆ ಎಂಬುದರ ನೈಜ ಚಿತ್ರಣವಿದೆ.ಮುಗ್ಧತೆಯಿದೆ.ನಮ್ಮ ನಿಮ್ಮೆಲ್ಲರ ಪ್ರಾಥಮಿಕ ಶಾಲಾ ಜೀವನವಿದೆ.
ಇಲ್ಲಿರುವ ಯಾವುದೇ ಘಟನೆಗಳು ಕಟ್ಟುಕತೆಯಲ್ಲ.ಶಿಕ್ಷಕರಾದವರು ಮಾತೃಹೃದಯಿಗಳಾಗಿದ್ದಲ್ಲಿ ಹಾಗೂ ಮಕ್ಕಳ ಭಾವನೆಗಳಿಗೆ ಕಿವಿಯಾಗುವ ಮನಸ್ಸುಳ್ಳವರಾದಲ್ಲಿ ಇವೆಲ್ಲವೂ ಉಳಿದ ಶಿಕ್ಷಕರ ತರಗತಿಯಲ್ಲೂ ನಡೆಯುತ್ತವೆ.ಆದರೆ ಕೆಲವು ಶಿಕ್ಷಕರು ಸೋಲುವುದೇ ಇಲ್ಲಿ.ಕಾಣುವುದು ಬಿಡಿ,ಕೇಳಿಸಿಕೊಳ್ಳಲು ಪುರುಸೊತ್ತು ಇಲ್ಲ ಎನ್ನುವುದು ಅವರ ಅಂಬೋಣ.
ಇಲಾಖೆಯಿಂದ ಬಂದಿರುವ ಪಠ್ಯ ವಸ್ತುವನ್ನು ತನಗೆ ತಿಳಿದಿದ್ದಷ್ಟನ್ನು 40ನಿಮಿಷಗಳಲ್ಲಿ ಮಕ್ಕಳೆದುರು ಒಪ್ಪಿಸಿ ,ತಾನು ಕೊಟ್ಟ ಪ್ರಶ್ನೆಗಳಿಗೆ ತನ್ನ ನಿರೀಕ್ಷೆಯಂತೆಯೇ ಮಕ್ಕಳಿಂದ ಉತ್ತರಿಸಿಕೊಂಡು ಮೌಲ್ಯಮಾಪನ ಮಾಡಿ ಷರಾ ಎಳೆದು ಬಿಟ್ಟರೆ ಮುಗಿಯಿತು,ಇದೇ ತನ್ನ ಶಿಕ್ಷಕ ವೃತ್ತಿ ಎಂದುಕೊಂಡವರು ದಯವಿಟ್ಟು ಒಮ್ಮೆ ಈ ಕೃತಿಯನ್ನು ಓದಿ.ಓದುವಾಗಲೇ ನಿಮ್ಮ ಕಣ್ಣಾಲಿಗಳು ತುಂಬದಿದ್ದರೆ ಕೇಳಿ.ಹಾಗೆಯೇ ಮರುದಿನವೇ ನಿಮ್ಮ ತರಗತಿ ಪ್ರಕ್ರಿಯೆಯೂ ಬದಲಾಗುತ್ತದೆ!.
ಹಾಗಾದರೆ! ಅಂತಹುದು ಏನಿದೆ ? ಅಂತ ನೀವು ಕೇಳಬಹುದು.ಪ್ರಾಥಮಿಕ ಶಾಲೆಯ ತರಗತಿ ಕೋಣೆಯಲ್ಲಿ ಪ್ರತೀ ತರಗತಿಯಲ್ಲಿ ಸುಗಮಕಾರರಾಗಿ ಮಗುವಿಗೆ ಪಠ್ಯದ ಆಚೆಗೆ ಏನು ಬೇಕೋ ಅದನ್ನು ಕಲಿಸಿದ್ದಾರೆ.ಅದು ವಿಭಿನ್ನ ಆಹಾರಾಭ್ಯಾಸಗಳನ್ನು ಬಲು ಗೌರವದಿಂದ ನೋಡುವುದು,ರೈತನಿರಲಿ-ಯೋಧನಿರಲಿ ಬದುಕಿನಲ್ಲಿ ಎದುರಾಗುವ. ಬೇರೆ ಬೇರೆ ವೃತ್ತಿ-ವ್ಯಕ್ತಿಗಳ. ಘನತೆಯನ್ನು ಗುರುತಿಸುವುದು,ಸಕಲ ಚರಾಚರ ಜೀವಿಗಳನ್ನೂ ದಯೆ ಮತ್ತು ಪ್ರೀತಿಯಲ್ಲಿ ಕಾಣುವುದು,ನಮ್ಮ ನಡುವೆ ದ್ವೇಷವನ್ನು ಸ್ಥಾಯಿಯಾಗಿಸುವ,ಸ್ಥಾಪಿಸುವ ಜಾತಿ,ಮತ,ಧರ್ಮ,ಭಾಷೆಯ ಗೋಡೆಗಳನ್ನು ಒಡೆದು ಮಾನವೀಯ ಸಂಬಂಧಗಳನ್ನು ಸ್ಥಾಪಿಸುವ ಆಶಯ, ಶಿಕ್ಷೆ-ಭಯ-ಪ್ರೀತಿ,ಕನ್ನಡ ಪ್ರೀತಿ ಎಲ್ಲವೂ ತರಗತಿ ಕೋಣೆಯ ಕಲಿಕೆಯಾಚೆ ಬದುಕು ನಡೆಸಲು ಬೇಕಾದವುಗಳು.ಇವೆಲ್ಲವೂ ಮೌಲ್ಯಮಾಪನ ಕ್ಕೆ ಮಾತ್ರ ಸೀಮಿತವಾಗಿಲ್ಲ.ಬದುಕಿನ "ಮೌಲ್ಯ" ಹೆಚ್ಚಿಸುವಂತವುಗಳು.ಇದು ಇಂದಿನ ಶಿಕ್ಷಣದ ಅಗತ್ಯತೆ ಕೂಡ.ಇದನ್ನು ಶಿಕ್ಷಕಿ ಮಾದರಿಯಾಗಿ ನಮಗೆ ಈ ಕೃತಿಯಲ್ಲಿ ತೋರಿಸಿಕೊಟ್ಟಿದ್ದಾರೆ.
ಹಚ್ಚೇವು ಕನ್ನಡದ ದೀಪ ಲೇಖನದಲ್ಲಿ ಓರ್ವ ಕನ್ನಡ ಶಿಕ್ಷಕಿಯಾಗಿ ಅವರು ಮಾಡುವ ಪಾಠ ಹೃದಯಕ್ಕೆ ಇಳಿಯುತ್ತದೆ.ಸಾಮಾನ್ಯವಾಗಿ ಇಂತವುಗಳನ್ನು ಇಷ್ಟು ಸರಳವಾಗಿ ಹೇಳಿಕೊಟ್ಟರೆ ಬದುಕಿನುದ್ದಕ್ಕೂ ತಪ್ಪು ಮಾಡುವುದು ಕಡಿಮೆ ಆಗುತ್ತದೆ.
ಜೊತೆಗೆ ಆ ಲೇಖನದಲ್ಲಿ ಮಕ್ಕಳಹಾಸ್ಯಭರಿತ ಸಂಭಾಷಣೆಗೆ ನಾನಂತೂ ಮನಸಾರೆ ನಕ್ಕಿದ್ದೆ.ಅದು ಹೀಗಿದೆ,
"ಏಯ್,ಸಮರ್ಥ, ದೀಪ ಸರಿ ಹಿಡ್ಕಳ,ಎಣ್ಣೆ ಚೆಲ್ಲಿ ಹೋತತೆ"
"ಅಲ್ಲಾ ಮಿಸ್,ಕೈ ಅಗಾ...ಲ ಮಾಡಿದ್ರೆ ದೀಪ ಬಿದ್ದು ಎಣ್ಣೆ ಚೆಲ್ಲಿ ಹೋತತಲ,ಅದ್ಕೆ ಗುಂಡಗೆ ಹಿಡ್ಕ ಅಂದೆ ಮಿಸ್".
ಇದು ಅಭಿನಯದಲ್ಲಿ ಮುಳುಗಿ ಹೋದ ಮಕ್ಕಳ ನಡುವೆ ನಡೆಯುವ ಸಂಭಾಷಣೆ. ಇಂತಹ ಹಲವಾರು ನಕ್ಕು ನಕ್ಕು ಕಣ್ಣಲ್ಲಿ ನೀರು ತರಿಸುವ ಸಂಭಾಷಣೆಗಳಿವೆ.
ಇವೆಲ್ಲಾ ನಮ್ಮ ತರಗತಿ ಕೋಣೆಯಲ್ಲಿ ನಡೆಯುತ್ತವೆಯೇ? ನಾವು ಮಕ್ಕಳೊಂದಿಗೆ ಮಕ್ಕಳಾಗಿದ್ದೇವಾ? ಅವರ ಭಾವನೆಗಳಿಗೆ,ಮುಗ್ಧತೆಗಳಿಗೆ ಬೆರಗಾಗಿದ್ದೇವಾ? ಸುಮ್ನೆ ಕೂತ್ಕೊಳಾ ಎಂದು ಗದರಿಸಿ ಮಗು ಮುಂದೆ ಎಂದೂ ಪ್ರಶ್ನೆ ಕೇಳಬಾರದಂತಹ ಸ್ಥಿತಿಗೆ ತಂದಿದ್ದೇವಾ? ಹೀಗೆ ನಮ್ಮ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ ಈ ಕೃತಿ.
" ನಾನು ಮಾಮೂಲಿಯಾಗಿ ಕೇಳಿಬಿಟ್ಟರೆ ಮಕ್ಕಳಿಗೆ ಬೇಸರವಾಗಿ ಬಿಡುತ್ತದೆ" ಇಂತಹ ಔದಾರ್ಯದಿಂದಲೇ ಮಕ್ಕಳೆದುರು ಈ ಶಿಕ್ಷಕಿ ಸೋತಂತೆ,ಬೇಸ್ತುಬಿದ್ದಂತೆ,ದಡ್ಡಿಯಂತೆ ವರ್ತಿಸುತ್ತಾರೆ.ಆ ಕ್ಷಣದಲ್ಲಿ ಮಕ್ಕಳಿಂದ ಬರುವ ಪ್ರತಿಕ್ರಿಯೆಗಳನ್ನು ಮಲೆನಾಡು ಭಾಷೆಯಲ್ಲೇ ಯಥಾವತ್ತಾಗಿ ದಾಖಲಿಸಿರುವುದು ಆಪ್ತವಾಗುತ್ತದೆ.
ಇಡೀ ಕೃತಿಯು ಶಿಕ್ಷಕರಿಗೆ ವೃತ್ತಿಜೀವನದ ಮಾರ್ಗದರ್ಶಿಯಾಗಿ ಒಂದೇ ಓಘದಲ್ಲಿ ಓದಿಸಿಕೊಂಡು ಹೋಗುತ್ತದೆ. ಇನ್ನೂ ತರಗತಿಯಲ್ಲಿ "ಶಿಕ್ಷಕ(ಕಿ)" ರಾಗದವರು ನೀವೇಕೆ ಇನ್ನೂ ಹೀಗಾಗಿಲ್ಲ ಎಂದು ಅರಿತುಕೊಳ್ಳುವಂತೆ ಮಾಡುತ್ತದೆ.
ಬಾಲ್ಯವೆಂಬ ಉದ್ಯಾನದಲ್ಲಿ ಸುಂದರ ಹೂಗಳು ಅರಳಿ ಸುಗಂಧವನ್ನು ಸೂಸಬೇಕೇ ಹೊರತು ಜಾಲಿ,ಕಳ್ಳಿಯಂತಹ ಗಿಡಬೆಳೆದು ಮನಸ್ಸನ್ನು ಮುಳ್ಳಾಗಿಸಬಾರದು.ಇದನ್ನು ಹೇಗೆ ನಿರ್ಮಿಸಬೇಕು ಎಂಬ ಅರಿವು ಶಿಕ್ಷಕರಿಗಿರಬೇಕು.ಬಾಲ್ಯವನ್ನು ಸಮೃದ್ಧವಾಗಿಸುವುದೂ ಕೂಡ ಶಿಕ್ಷಕರ ಜವಾಬ್ದಾರಿ. ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅವರ ಶಿಕ್ಷಕರೇ ಬದುಕಿನ ರೋಲ್ ಮಾಡೆಲ್.ಅವರನ್ನು ಅನುಕರಿಸಿದಷ್ಟು ಮಕ್ಕಳು ಬೇರೆ ಯಾರನ್ನೂ ಅನುಕರಿಸಲಾರರು.ಹಾಗಾಗಿ ಮಕ್ಕಳೆದುರು "ಶಿಕ್ಷಕ" ನಾಗಿಯೇ ಇರಬೇಕು ಅಂದುಕೊಂಡವರು"ಮಿಸ್ಸಿನ ಡೈರಿ"ಯನ್ನು ಮಿಸ್ ಮಾಡದೇ ಓದಿ..ಓದದಿದ್ದರೆ ನಿಮ್ಮ ವೃತ್ತಿ ಜೀವನದ ಹೊಳಪನ್ನೇ ಮಿಸ್ ಮಾಡಿಕೊಳ್ಳುವಿರಿ..
ರೇಖಾಪ್ರಭಾಕರ್
ಶಂಕರನಾರಾಯಣ
ಧನ್ಯವಾದಗಳು ಆರಾಧ್ಯ ಸರ್...ಶಿಕ್ಷಕರು ಓದಲೇ ಬೇಕಾದ ಕೃತಿ ಇದು.
ReplyDelete