*ದಿನಕ್ಕೊಂದು ಶಿಶುಗೀತೆ*
*37.ಕೈಗೆ ಸಿಗದ ಮಾವು ಹುಳಿ..!*
ಬೇಸಿಗೆ ರಜೆಯಲಿ ಒಂದಿನ ನಾನು
ತೋಟಕೆ ಹೋಗಿದ್ದೆ/
ತುಂಬಿದ ಫಸಲಿನ ಮಾವಿನ ಮರದ
ಕೆಳಗಡೆ ನಿಂತಿದ್ದೆ//೧//
ಗಾಳಿಗೆ ತೂಗುತ ಉಯ್ಯಾಲೆ ಆಡುವ
ಕಾಯ್ಗಳ ಕಂಡಿದ್ದೆ/
ಹುಳಿ ಸಿಹಿ ರುಚಿಯ ಮಾವಿನ ಕಾಯ್ಗಳ
ನೆನೆದೂ ಹಿಗ್ಗಿದ್ದೆ!//೨//
ಉಪ್ಪುಖಾರವ ಸವರುತ ತಿನ್ನುವ
ಕನಸನು ಕಂಡಿದ್ದೆ/
ಉಳಿದರೆ ಗೆಳೆಯರ ಬಳಗಕೆ ಹಂಚಿ
ಬೀಗುವೆನೆಂದಿದ್ದೆ//೩//
ಬಾಯೊಳು ನೀರಿನ ಬುಗ್ಗೆಯು ಚಿಮ್ಮಲು
ಉಪಾಯ ಹುಡುಕಿದ್ದೆ/
ಕೋಲನು ತಂದು ಕಾಯ್ಗಳ ಬಡಿಯಲು
ಎಗರೀ ಜಿಗಿದಿದ್ದೆ//೪//
ಒಂದೇ ಒಂದು ಕಾಯಿಯು ಬೀಳದೆ
ಬೇಸರಗೊಂಡಿದ್ದೆ/
ಮರಳೀ ಯತ್ನವ ಮಾಡುವೆನೆನುತ
ಕಲ್ಲನು ಹುಡುಕಿದ್ದೆ//೫//
ಒಂದರ ಹಿಂದೆ ಒಂದೆಂಬಂತೆ
ಕಲ್ಗಳ ಹೊಡೆದಿದ್ದೆ/
ನೆಟ್ಟಿಹ ಗುರಿಯು ತಪ್ಪೇ ಹೋಯ್ತು
ಬಿಸಿಲಲಿ ಬಳಲಿದ್ದೆ!//೬//
ರಟ್ಟೆಯ ಕಸುವು ಕುಸಿಯಲು ಕೊನೆಗೆ
ಯತ್ನವ ಕೈಬಿಟ್ಟೆ
ಮೆಲ್ಲನೆ ಹಿಂದಕೆ ಸರಿಯುತ ಕಾಲಿಗೆ
ಬುದ್ಧಿಯ ಹೇಳಿದ್ದೆ!//೭//
ಎಟುಕಲಾರದ ಮಾವಿನ ಕಾಯ್ಗಳು
ಬಲುಹುಳಿ ಎಂದಿದ್ದೆ/
ಎತ್ತರ ಬೆಳೆದ ಮರವನು ಹಳಿಯುತ
ಮನೆಗೆ ಮರಳಿದ್ದೆ//೮//
ಪುಸ್ತಕದಲ್ಲಿ 'ನರಿ ಹುಳಿ' ದ್ರಾಕ್ಷಿಯ
ಕಥೆಯನು ಓದಿದ್ದೆ/
ನರಿಯ ಪಾತ್ರದಿ ನನ್ನನೆ ಕಂಡು
ನಾಚಿ ಮುದುರಿದ್ದೆ!//೯//
●●●●●●●●●●●●●●●●●
ಸಂಗ್ರಹ: *ರೇಣುಕಾರಾಧ್ಯ*
GLPS,M Koppalu,Arasikere
ರಚನೆ:*ಭಾಗ್ಯ ಎಂ.ವಿ.*
ಶಿಕ್ಷಕಿ ಮತ್ತು ಕವಯಿತ್ರಿ
ಸ.ಹಿ.ಪ್ರಾ.ಶಾಲೆ, ಕೆಂಗುರುಬರಹಟ್ಟಿ ಅರಸೀಕೆರೆ-ತಾ||
ಗಾಯನ:*ಎಂ.ಜಿ.ಪರಮೇಶ್ ಮಡಬಲು*
BRP, BRC ಕೇಂದ್ರ,ಹೊಳೆನರಸೀಪುರ
*ಆಡಿಯೋ ಲಿಂಕ್*
https://drive.google.com/file/d/12XbtQOOGNG2R5ItU9ygx4unOByHJ9Sq6/view?usp=drivesdk
No comments:
Post a Comment